ಟೇಲ್
 	ಮಧ್ಯ ಯುಗದ ಫ್ರಾನ್ಸಿನಲ್ಲಿ ಚಾಲ್ತಿಯಲ್ಲಿದ್ದ ದೊರೆ ಅಥವಾ ಪ್ರಭು ತನ್ನ ಪ್ರಜೆಗಳ ಮೇಲೆ ಅಥವಾ ಜಮೀನಿನ ಮೇಲೆ ವಿಧಿಸುತ್ತಿದ್ದ ಪ್ರತ್ಯಕ್ಷ ತೆರಿಗೆ. ತೆರಿಗೆದಾರರು ಒಟ್ಟುಗೂಡಿ ಇಂತಿಷ್ಟು ತೆರಿಗೆಯನ್ನು ಕೊಡಬೇಕೆಂಬುದನ್ನು ತೆರಿಗೆ ವಿಧಿಸುವ ದೊರೆ ಅಥವಾ ಪ್ರಭು ನಿರ್ಧರಿಸುತ್ತಿದ್ದದ್ದು ಇದರ ಒಂದು ಪ್ರಮುಖ ಲಕ್ಷಣ. ತೆರಿಗೆದಾರರು ತಮ್ಮ ತಮ್ಮಲ್ಲೆ ಈ ತೆರಿಗೆಯ ಹೊರೆಯನ್ನು ಹಂಚಿಕೊಳ್ಳುತ್ತಿದ್ದರು.

	ಫ್ರಾನ್ಸಿನಲ್ಲಿ ಒಂದೊಂದು ಅವಧಿಯಲ್ಲಿ ಒಂದೊಂದು ಬಗೆಯ ಟೇಲ್ ಜಾರಿಯಲ್ಲಿತ್ತು. ಇಲ್ಲಿ ಸ್ಥೂಲವಾಗಿ ಮೂರು ಬಗೆಯ ಟೇಲ್‍ಗಳನ್ನು ಕುರಿತು ಪ್ರಸ್ತಾಪಿಸಬಹುದು. ಅವು : ಜೀತದ ಟೇಲ್ (ಟೇಲ್ ಸರ್ವೈಲ್), ಪ್ರಭುತ್ವ ಟೇಲ್ (ಟೇಲ್ ಸೀನ್ಯೂರಿಯಲ್), ಮತ್ತು ರಾಜತ್ವ ಟೇಲ್ (ಟೇಲ್ ರಾಯಲ್).

	ಜೀತದ ಟೇಲ್ ಎಂಬುದು ಪ್ರಭುಗಳು ತಮ್ಮ ಜೀತದಾರರಿಂದ ವಸೂಲು ಮಾಡುತ್ತಿದ್ದ ಕರ. ಪ್ರಾರಂಭದಲ್ಲಿ ಪ್ರತಿ ಪ್ರಭುವೂ ತನಗೆ ತೋಚಿದಷ್ಟು ಕರವನ್ನು ತನಗೆ ತೋಚಿದಷ್ಟು ಸಾರಿ ಜೀತದಾರನಿಂದ ವಸೂಲು ಮಾಡುತ್ತಿದ್ದ. ಆದರೆ ಕಾಲಕ್ರಮದಲ್ಲಿ ಈ ಪದ್ಧತಿ ಸುಧಾರಣೆ ಹೊಂದಿತು. ಪ್ರಭುವಿನ ಮತ್ತು ಜೀತದಾರನ ನಡುವಣ ಒಡಂಬಡಿಕೆಗೆ ಅನುಸಾರ ವಿಧಿಸಲ್ಪಡುತ್ತಿತ್ತು. ತೆರಿಗೆಯನ್ನು ಒಂದು ಸೀಮಿತ ಅವಧಿಗೆ ವಿಧಿಸಲಾಗುತ್ತಿತ್ತಲ್ಲದೆ ಅದರ ಮೊಬಲಗು ಸ್ಥಿರವಾಗಿತ್ತು.

	ಪ್ರಭುಗಳು ತಮ್ಮ ಜೀತದಾರನಿಂದ ವಿಧಿಸುತ್ತಿದ್ದ ದೊರೆಯೂ ತನ್ನ ಸ್ವಂತ ಜಮೀನಿನ ಸಾಗುವಳಿ ಮಾಡುತ್ತಿದ್ದವರ ಮೇಲೆ ವಿಧಿಸುತ್ತಿದ್ದ ತೆರಿಗೆ ಪ್ರಭುತ್ವ ಟೇಲ್. ಆದರೆ ಕಾಲಕ್ರಮದಲ್ಲಿ ಅವನು ಈ ತೆರಿಗೆಯನ್ನು ತನ್ನ ಎಲ್ಲ ಪ್ರಜೆಗಳ ಮೇಲೂ ವಿಧಿಸುವ ಹಕ್ಕನ್ನು ಸಾಧಿಸಿಕೊಂಡ. ಆಗ ಇದು ತನ್ನ ಪರಿವಾರದ ಪೋಷಣೆ ಹಾಗೂ ಯುದ್ಧಗಳ ವೆಚ್ಚವನ್ನು ಹೊರವು ಉದ್ದೇಶದಿಂದ ವಿಧಿಸಲಾಗುವ ತೆರಿಗೆಯೆನಿಸಿಕೊಂಡಿತು. ಅಲ್ಲಿಂದೀಚೆಗೆ ಈ ತೆರಿಗೆ ಶಾಶ್ವತವಾಗಿ ಮುಂದುವರಿಯುತ್ತ ಬಂತು. ಇದು ರಾಜತ್ವ ಟೇಲ್ ಎನಿಸಿಕೊಂಡಿತು. ಹೊರಗೆ ಮಾತ್ರ ಟೇಲ್ ವಿಧಿಸುವ ಹಕ್ಕುಂಟು ಎಂಬುದನ್ನು ತೆರಿಗೆದಾರನ ಆಸ್ತಿ ಅಥವಾ ಆದಾಯವನ್ನು ಗಮನದಲ್ಲಿಟ್ಟುಕೊಂಡು ರಾಜನ ಸಲಹಾ ಮಂಡಲಿ ನಿರ್ಧರಿಸುತ್ತಿತ್ತು ಟೇಲನ್ನು ಕೆಲವು ಪ್ರದೇಶಗಳಲ್ಲಿ ವ್ಯಕ್ತಿಯ ಆಧಾರದ ಮೇಲೂ ಇನ್ನು ಕೆಲವು ಎಡೆಗಳಲ್ಲಿ ಜಮೀನಿನ ಆಧಾರದ ಮೇಲೂ ವಿಧಿಸಲಾಗುತ್ತಿತ್ತು. ಶ್ರೀಮಂತರಿಗೂ ಪಾದ್ರಿಗಳಿಗೂ ಟೇಲ್‍ನಿಂದ ವಿನಾಯಿತಿಯಿತ್ತು. ಅನಂತರ ಇನ್ನು ಹಲವು ವರ್ಗಗಳ ಜನರನ್ನು ಈ ಪಟ್ಟಿಗೆ ಸೇರಿಸಲಾಯಿತು. ವಿನಾಯಿತಿದಾರರ ಪಟ್ಟಿ ವಿಸ್ತರಿಸಿದಂತೆಲ್ಲ ಟೇಲ್ ಪಾವತಿದಾರರ ಸಂಖ್ಯೆ ಕುಗ್ಗಿ ಅವರ ಮೇಲಣ ಹೊರೆ ಅಸಹನೀಯವೆನಿಸುವಷ್ಟು ಹೆಚ್ಚಿತು. ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಟೇಲ್ ರದ್ದಾಯಿತು.
(ಎ.ಬಿ.ಎ.)